ಅಹಾರ್

ರಾಜಸ್ತಾನದ ಉದಯಪುರ ಪಟ್ಟಣದ ಅಂಚಿನಲ್ಲಿರುವ ಅಹಾರ್ ನದಿದಡದ ಮೇಲೆ ಇರುವ ಈ ದಿಬ್ಬದಲ್ಲಿ ಪ್ರಾಚೀನ ಸಂಸ್ಕøತಿಗಳ ಅವಶೇಷಗಳು ಸಿಕ್ಕಿವೆ. ಇಲ್ಲಿ ಕ್ರಿ.ಪೂ.ಸು.1800  ರಿಂದ  1200ರ ವರೆಗೆ ತಾಮ್ರಯುಗದ ಸಂಸ್ಕøತಿಯೂ ಕ್ರಿ.ಪೂ.ಸು. 500ರಿಂದ ಕ್ರಿ.ಶ.ಸು 700 ರ ವರೆಗೆ ಚಾರಿತ್ರಿಕ ಕಾಲದ ಸಂಸ್ಕøತಿಗಳೂ ಪ್ರಚಲಿತವಾಗಿದ್ದುವೆಂದು ಉತ್ಖನನಗಳಿಂದ ತಿಳಿದುಬಂದಿದೆ. ಅಹಾರ್‍ನ ತಾಮ್ರಯುಗದ ಸಂಸ್ಕøತಿ ವಿಶಿಷ್ಟರೀತಿಯದ್ದಾಗಿದ್ದು, ಅದನ್ನು ಅಹಾರ್‍ನ ಸಂಸ್ಕøತಿಯೆಂದೇ ಕರೆಯುವ ವಾಡಿಕೆಯಿದೆ. ಭಾರತದ ಸಮಕಾಲೀನ ಸಂಸ್ಕøತಿಗಳಂತೆ ಬಹಳವಾಗಿ ಶಿಲಾಯುಧಗಳನ್ನು ತಾಮ್ರದ ಜೊತೆಯಲ್ಲೇ ಉಪಯೋಗಿಸದಿರುವುದು ಅಹಾರ್ ಸಂಸ್ಕøತಿಯ ವೈಶಿಷ್ಟ್ಯ್ತ. ಅಹಾರ್ ಮತ್ತು ಸುತ್ತುಮುತ್ತಲಿನ ಪ್ರದೇಶದಲ್ಲಿ ತಾಮ್ರ ಸುಲಭವಾಗಿ ಸಿಕ್ಕುತ್ತಿದ್ದುದರಿಂದ ಈ ಜನರಿಗೆ ಕಲ್ಲಿನ ಆಯುಧಗಳ ಆವಶ್ಯಕತೆ ಇರದಿರಬಹುದೆಂದೂ ಕೆಲವು ಬಹುಶಃ ತಾಮ್ರವನ್ನು ಗಣಿಗಳಿಂದ ತೆಗೆದು ವಸ್ತುಗಳನ್ನು ತಯಾರುಮಾಡುವುದು ಈ ಜನರ ಮುಖ್ಯ ಕಸಬಾಗಿದ್ದಿರಬಹುದೆಂದೂ ಕೆಲವು ವಿದ್ವಾಂಸರ ಊಹೆ. ಆ ಕಾಲದಲ್ಲಿ ಮನೆಗಳು ಕಲ್ಲಿನ ಪಾಯಗಳ ಮೇಲೆ ಮಣ್ಣಿನಲ್ಲಿ ಕಟ್ಟಲ್ಪಡುತ್ತಿದ್ದವು. ಕೆಲವು ತಡಿಕೆಗೋಡೆಗಳೂ ಕಂಡುಬಂದಿವೆ. ಮನೆಗಳು ಸಾಮಾನ್ಯವಾಗಿ ವಿಶಾಲವಾಗಿದ್ದು, ಒಂದು ದೊಡ್ಡ ಹಜಾರದ ಒಳಗೆ ಹಲವಾರು ಹರಿವೊಲೆಗಳಿರುತ್ತಿದ್ದವು. ಕೆಂಪು ಮತ್ತು ಕಪ್ಪುಹೊಳಪಿನ ಮಡಕೆಗಳು ಆಕಾಲದಲ್ಲಿ ಉಪಯೋಗದಲ್ಲಿದ್ದವು. ಕೆಲವು ಮಡಕೆಗಳ ಮೇಲೆ ಬಿಳಿಯ ಬಣ್ಣದ ನೇರ ಅಥವಾ ಡೊಂಕು ಗೆರೆಗಳು, ಚುಕ್ಕಿಯ ಗೆರೆಗಳು ಮುಂತಾದ ಸಾಮಾನ್ಯ ನಮೂನೆಗಳ ಚಿತ್ರಣ ಇರುತ್ತಿತ್ತು. ಈ ಸಂಸ್ಕøತಿ ಆಗ್ನೇಯ ರಾಜಸ್ತಾನದ ಬನಾಸ್ ನದೀ ಕಣಿವೆಯಲ್ಲಿ ಹಬ್ಬಿತು.

ಅಹಾರ್ ದಿಬ್ಬದ ಚಾರಿತ್ರಿಕ ಕಾಲದ ಸ್ತರಗಳಲ್ಲಿ ಉತ್ತರ ಭಾರತದ ಕಪ್ಪು ಹೊಳಪಿನ ಮಡಕೆಗಳೂ ರಂಗಮಹಲ್ ರೀತಿಯ ಮಡಕೆಗಳು ದೊರಕಿವೆ.										
(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ